Thursday, May 28, 2009

ನಾ ಕಟ್ಟಿಕೊಟ್ಟ ಒಲವನ್ನ



ಹೊರಟಿರುವೆ ತೊರೆದು ಎನ್ನ
ತಡೆಯುವ ಶಕ್ತಿ ಉಳಿದಿಲ್ಲ, ನನ್ನ
ಪ್ರೀತಿಯ ರುಜುಪಡಿಸುವ ಅಗತ್ಯವಿಲ್ಲ
ಹಗಲ ರವಿಯ, ನಿಶೆಯ ಚಂದಿರನ ಕೇಳು
ನಮ್ಮಿಬ್ಬರ ಪ್ರೀತಿಗೆ ಅವರಿಗಿಂತ ಸಾಕ್ಷಿ ಬೇಕಿಲ್ಲ.

ನದಿ ದಂಡೆಯಲಿ ಘಂಟೆಗಟ್ಟಲೆ ಕುಳಿತಿದ್ದು
ನಿಷ್ಕಳಂಕವಾಗಿ ನಾ ನಿನ್ನ ಪ್ರೇಮಿಸಿದ್ದು
ಹರಿದು ಸಾಗರವ ಸೇರಿರುವ ಆ ನದಿಯ
ನೀರಿಗೆ ಗೊತ್ತು, ಆಗಸದಿ ಹಾರಾಡಿ ನಾಚಿ
ಗೂಡು ಸೇರಿದ ಪಕ್ಷಿಗಳಿಗೆ ಗೊತ್ತು ನಾ
ಮೊಸಗಾರನಲ್ಲ, ನಿನ್ನ ವಂಚಿಸಿಲ್ಲ.

ಹೇಗೂ ಹೊರಟಿರುವೆ, ಹೋಗು, ಯಾಕೆಂದರೆ
ಪ್ರೀತಿಯಲಿ ನಂಬಿಕೆಯೇ ಮುಖ್ಯ, ಬೇಡಿ ಪಡೆದರೆ
ವರವಾದಿತೇ ಹೊರತು ಪ್ರೇಮವಾಗಲಾರದದು
ಮರೆತುಬಿಡು ನನ್ನ, ನಾವು ಕಳೆದ ಮಧುರ
ಕ್ಷಣಗಳನ್ನ, ಮರೆಯಬೇಡ ನಾ ಕಟ್ಟಿಕೊಟ್ಟ ಒಲವನ್ನ!!

Saturday, May 23, 2009

ವಚನ


ವಚನವ ನೀಡುವೆ ನಾನಿನಗೆ
ಜೀವನ ಪೂರ್ತಿ ಪ್ರೀತಿ ನೀಡುವ
ನೋವಲ್ಲು ಜೊತೆಗಿರುವ ವಚನ.

ಓ ನನ್ನ ಪ್ರೀತಿಯೇ! ಎಲ್ಲಿರುವೆ
ನೀನು? ಮನಸು ನಿಲ್ಲದು ನೀನಿಲ್ಲದೆ.
ನಿನಗೂ ಹಾಗೆ ಅಲ್ಲವೇ? ಹಣೆಯ
ಕುಂಕುಮ, ಕೈಯ ಬಳೆ, ಕಾಲ್ಗೆಜ್ಜೆ
ಕಾತರಿಸುವ ಕಣ್ಣಿನಲಿ ಬಯಕೆಯಿದೆ
ಸೇರಲು, ಹೇಗಿರುವೆ ನಾ-ನಿಲ್ಲದೆ?

ನನ್ನ ಕನಸಲ್ಲಿ, ಮನಸಲ್ಲಿ
ನೀನೆ ತುಂಬಿರುವಾಗ, ನಾ
ಹೇಗೆ ಬಾಳಲಿ ನೀನಿಲ್ಲದೆ?
ಯಾವ ಬೇರೆ ವಿಷಯವೂ ಆಗದಾಗಿದೆ ಪಚನ.
ನಿನ್ನ ನಾ ನನ್ನ ರೆಪ್ಪೆಯಡಿಯಲಿ ಬಚ್ಚಿಡುವೆ
ನಾ ನಿನ್ನ ಉಸಾರಿಗಿಸಿ ಕೊಲ್ಲುವೆ, ಕೊಡಬಲ್ಲೆ
ಜಗದ ಕೊನೆವರೆಗೂ ಜೊತೆಗಿರುವೆ ನಾ ಎಂಬ ವಚನ.


ನಾನು ಸ್ವಲ್ಪ ಪೋಲಿ







ಅಂದದ ಪುಜಾರಿ ನಾನು
ಸದಾ ಚಂದದ ಹಿಂದೆಯೇ ಸಾಗುವೆ.
ಈ ಪ್ರೀತಿ-ಪ್ರೇಮ ಇವೆಲ್ಲ ಬಹಳ
ಕಷ್ಟದ ಕೆಲಸ, ನನ್ನೇ ಯಾಕೆ ಕೋರುವೆ?

ಯಾವುದೇ ಪ್ರಮಾಣವ ಮಾಡಲಾರೆ
ನಾ ಸಂಬಧಗಳ ವಿಷಯದಿ ಶೂನ್ಯ.
ಪ್ರೇಮವೆಂದು ಭಾವಿಸಿ, ನನ್ನೊಂದಿಗೊಂದಾಗಿ
ನಾ ಮುಂದೆ ಸಾಗಿದ ಮೇಲೆ ಜರಿಯಬೇಡ
ಮೊಸಗಾರನೆಂದು, ಪ್ರೀತಿಗಿಂತ ಅಂದವೇ ಎನಗೆ ಮಾನ್ಯ.

ಪ್ರೀತಿ-ಪ್ರೆಮಕೆಲ್ಲ ಸಮಯವಿಲ್ಲ
ನನ್ನ ಬಳಿ, ಬಯಕೆಗಳು ನೂರಿವೆ ಇನ್ನೂ
ಈ ನನ್ನ ಕಳ್ಳ-ರಸಿಕ ಮನಸಿನಲಿ.
"ಕಾಸನೋವಾ" ಎನ್ನುವರು ತಿಳಿದವರು
ಎನ್ನ, ಸುಮ್ಮನೆ ಆಸೆಗಳ ಬೆಳೆಸಿಕೊಳ್ಳಬೇಡ
ನಿನ್ನ ಮನದಿ ಎನ್ನ ಬಗ್ಗೆ, ನಾನು ಸ್ವಲ್ಪ ಪೋಲಿ!!!

ಟೈಮಿಲ್ಲ

ನನಗಾಗಿ ಚಡಪಡಿಸುತ
ಕಾದಿಹಳು ಅಲ್ಲಿ ಮಿಸ್ ಇಂಡಿಯಾ!
ಏನು ಮಾಡಲಿ ನಾನು, ಟೈಮಿಲ್ಲ
ನನಗೆ, ಮದುವೆಯಾಗಿಯೂ ಲವ್ ಯು
ಎನುವಳು, ಅವಳೇ ರೀ (ರೈ) ಐಶ್ವರ್ಯ.

ತಾಜ್ ಮಹಲ್ ಖರೀದಿಯ
ಬಗ್ಗೆ ಮಾತನಾಡಲು ಮಿನಿಸ್ಟರ್
ಕರೆದಿಹರು ಬೆಳಿಗ್ಗೆ, ಸಾರಿ ಸರ್.
ನನಗೆ ಬರಲು ಸಾಧ್ಯವಿಲ್ಲ, ಚಂದ್ರ
-ನ ಖರಿದಿಸಬೇಕಿದೆ ನಾಳೆ, ಅಲ್ಲಿಂದಲೇ
ಕಳುಹಿಸಿಹರು ಒಬಾಮ ಎನಗೆಂದು ಏರ ಕಾರ್.

ಏನೇನೋ ಇನ್ನು ಮಾಡುವ
ಕೆಲಸಗಳು ಹಲವು ಬಾಕಿ ಇದ್ದವು.
ಆಗಲಿಲ್ಲ, ಟೈಮಿರಲಿಲ್ಲ ಎಲ್ಲವ ಮಾಡಲು.
ಅವನಿಗೆ ಅರ್ಜೆಂಟ್ ಅಂತೆ. ಅದೇ
ಮೆಲಿರುವವಗೆ, ಅಲ್ಲಿಗೆ ಹೊರಟಿರುವೆ
ಕೆಲವೊಂದು ವಿಷಯದಿ ಅವನಿಗೆ ಸಜೆಶನ್ ನೀಡಲು.

Wednesday, May 6, 2009

ಭೂತ-ವರ್ತಮಾನ-ಭವಿಷ್ಯ

ಕಳೆದು ಹೋದ ದಿನಗಳ ಬಗ್ಗೆ
ಯೋಚಿಸಬಾರದು, ಯೋಚಿಸಿ ಏನು
ಮಾಡಲು ಸಾಧ್ಯ? ಹೆಚ್ಚೆಂದರೆ ಹಿಡಿಯ
ಬಲ್ಲೆವು ಆ ಕಳೆದ ಕ್ಷಣಗಳಿಗೆ ಕನ್ನಡಿ.

ಬದುಕು ಭೂತದಲ್ಲಿಲ್ಲ, ಹಾಗೆಂದು
ಅದನು ಭವಿಷ್ಯದಲಿ ಹುಡುಕುವುದು ಸರಿಯಲ್ಲ,
ಜೀವನವ ಇಂದು ಬಾಳಬೇಕು ಗೆಳೆಯಾ,
ವರ್ತಮಾನದ ಬಾಳ್ವೆಯಲಿ ಇಡು ಮುನ್ನಡಿ.

ಇರಬೇಕು ಭವಿಷ್ಯದ ಯೋಚನೆ, ತಪ್ಪಲ್ಲ
ಅದರಲಿ ಮುಳುಗಬಾರದು, ಭವಿಷ್ಯ ನಿಲ್ಲುವುದೇ
ನಮ್ಮ ಇಂದಿನ ವರ್ತಮಾನದ ವರ್ತನೆಯಲಿ, ಅದಕಾಗಿ
ನಿನ್ನ ವರ್ತಮಾನದಿ ಬರೆ ಒಳ್ಳೆಯ ಭವಿಷ್ಯಕೆ ಮುನ್ನುಡಿ.